Karnataka Star Today

ರಾಯಚೂರಿನ ಬಡಮಕ್ಕಳು ಹಾಗೂ ಸಮುದಾಯದ ಸೇವಾ ಸಮರ್ಪಣಾ ಸಂತ ಸತೀಶ್ ಫರ್ನಾಂಡಿಸ್

ಶೋಷಿತರ ಪರವಾಗಿ ಕೆಲಸ ಮಾಡಿ ಜನರ ಕಣ್ಣಿಗೆ ಕಾಣುವ ನಿಜವಾದ ದೇವರಾಗಿ ಶ್ರಮಿಸಿದವರು ಹಿಂದಿನಿಂದಲೂ ನಮ್ಮ ದೇಶದೆಲ್ಲೆಡೆ ಹಲವರಿದ್ದಾರೆ. ಬಸವಣ್ಣ ನಾರಾಯಣಗುರುಗಳು ಜ್ಯೋತಿಬಾ ಪುಲೆ ದಂಪತಿಗಳು, ಗಾಂಧೀಜಿ ,ಅಂಬೇಡ್ಕರ್ ಅಂತಹ ದೊಡ್ಡ ದೊಡ್ಡ ಸಾಧಕರ ಜೊತೆಗೆ ಎಲೆ ಮರೆಯಲ್ಲೇ ಉಳಿದು ಶ್ರೀಸಾಮಾನ್ಯರ ಸೇವೆಸಲ್ಲಿಸಿದ ಹಲವು ಸೇವಕರು ನಮ್ಮಲ್ಲಿದ್ದಾರೆ.

ಮಾನ್ವಿ ತಾಲೂಕಿನ ಮಲ್ಕಾಪುರದಲ್ಲಿ ಗೈರು ಹಾಜರಾಗುತ್ತಿದ್ದ ಹುಸೇನಮ್ಮಳ ಬಗ್ಗೆ ಶಾಲೆಯಿಂದ ಮಾಹಿತಿ ಸಿಕ್ಕ ತಕ್ಷಣ ಅವರ ಮನೆಗೆ ಹೋಗಿ ಸಮಸ್ಯೆ ಆಲಿಸಿ ಅವಳ ಸಂಪೂರ್ಣ ಶೈಕ್ಷಣಿಕ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಭರವಸೆ ನೀಡಿ ಕೆಲವೇ ದಿನಗಳಲ್ಲಿ ಅವರ ಮನೆಗೆ ಹೋಗಿ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಿದರು. ಹುಸೇನಮ್ಮ ನಿರಂತರವಾಗಿ ಶಾಲೆಗೆ ಹಾಜರಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಅವಳೀಗ ಹೈಸ್ಕೂಲ್ ಶಿಕ್ಷಣ ಪಡೆಯುತ್ತಿದ್ದಾಳೆ. ಅವರ ಮನೆಯ ಸುತ್ತಲಿನ ಹಲವರ ಬಡತನ ಕಂಡು ಹೊಲಿಗೆ ತರಬೇತಿ ನೀಡಿಸಿದರು.ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಬಡತನ ನೀಗಿಸಲು ಒಂದಷ್ಟು ಶ್ರಮಿಸಿದರು. ಇಂತಹ ಉದಾಹರಣೆಗಳು ಮಾನ್ವಿ ತಾಲೂಕಿನ ಪೋತ್ನಲ್ ಸುತ್ತಲಿನ ಹಲವು ಊರುಗಳಲ್ಲಿವೆ. ಇಂತಹ ಸಾರ್ಥಕ ಸೇವೆ ಸಲ್ಲಿಸುತ್ತಿರುವವರು ಫಾದರ್ ಸತೀಶ್ ಫರ್ನಾಂಡಿಸ್.

ಸಮಾಜದಲ್ಲಿ ದನಿ ಇಲ್ಲದ ತಳಸಮುದಾಯದವರಿಗೆ ಹಾಗೂ ಯಾವುದೇ ಸಮುದಾಯದ ತಲುಪದವರಿಗೂ ಶಿಕ್ಷಣ, ಸರ್ಕಾರಿ ಯೋಜನೆಗಳನ್ನು ತಲುಪಿಸಲು ಸರ್ಕಾರ ಶ್ರಮಿಸುತ್ತಿದ್ದರೂ ಇನ್ನೂ ಗರಿಷ್ಟ ಗುರಿ ತಲುಪಲಾಗಿಲ್ಲ ಹಾಗೂ ಅವು ರಾಜಕೀಯ ಹಿಂಬಾಲಕರ ಪಾಲಾ ಗುತ್ತಿರುವುದನ್ನು ಮನಗಂಡ ಸತೀಶ್ ಫರ್ನಾಂಡಿಸ್ ಅವರು ಕಳೆದ ಹತ್ತು ವರ್ಷಗಳಿಂದ ಬಡ ಸಮುದಾಯಗಳ ಸೇವೆಗೆ ಹಲವಾರು ವಿನೂತನ ಸಾಮಾಜಿಕ ಶೈಕ್ಷಣಿಕ ಕಾರ್ಯಗಳ ಮೂಲಕ ಸಂಪೂರ್ಣ ಸಮರ್ಪಣಾ ಭಾವದಿಂದ ಶ್ರಮಿಸುತ್ತಿದ್ದಾರೆ. ಅವರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ,ಶೈಕ್ಷಣಿಕ ಜಾಗೃತಿಗೆ ನಿರಂತರವಾಗಿ ಬದುಕು ಸವೆಸುತ್ತಿದ್ದಾರೆ.

ರಾಯಚೂರಿನ ಹಲವು ಭಾಗಗಳಲ್ಲಿನ ಶೈಕ್ಷಣಿಕ ಸಾಮಾಜಿಕ ಸ್ಥಿತಿಗತಿ ಮನಗಂಡು ಶಿಕ್ಷಣಿಕ ಜಾಗೃತಿ ಇಲ್ಲದ ಪಾಲಕರ ಮನೆಮನೆಗೆ ತೆರಳಿ ಅವರಿಗೆ ಕೌಶಲ್ಯ ಆಧಾರಿತ ಉದ್ಯೋಗ, ಆರ್ಥಿಕ ಸಹಕಾರ ನೀಡಲು , ಶೈಕ್ಷಣಿಕ ಸವಲತ್ತುಗಳನ್ನು ಒದಗಿಸಲು, ಸರ್ಕಾರದ ಯೋಜನೆಗಳನ್ನು ತಲುಪಿಸಲು ಶ್ರಮಿಸುತ್ತಿರುವ ಫಾದರ್ ಸತೀಶ್ ಫರ್ನಾಂಡಿಸ್ ಅವರ ಸೇವೆಯನ್ನು ಇಲ್ಲಿನ ಸ್ಥಳೀಯರು ಸದಾ ಸ್ಮರಿಸುತ್ತಿದ್ದಾರೆ.

ಪೋತ್ನಾಳ ಸುತ್ತಲಿನ ಹಲವು ಬಡ ಸಮುದಾಯಗಳಿಗೆ ಹೊಲಿಗೆ ತರಬೇತಿ, ಶಿಕ್ಷಿತರಿಗೆ ಕಂಪ್ಯೂಟರ್ ತರಬೇತಿ, ಸರ್ಕಾರಿ ಯೋಜನೆಗಳ ಬಗ್ಗೆ ಅರಿವು, ಧನಸಹಾಯ ನೀಡಿದ್ದಾರೆ. ಆರೋಗ್ಯ ಅರಿವು ಜಾಗೃತಿ ಕಾರ್ಯಕ್ರಮ, ಬಾಲ್ಯವಿವಾಹ ಪದ್ಧತಿ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ, ಮಕ್ಕಳ ಹಕ್ಕು ಜಾಗೃತಿ ಅಭಿಯಾನಗಳು, ಮಕ್ಕಳ ಕಳ್ಳ ಸಾಗಾಣಿಕೆ ವಿರುದ್ಧ ಜಾಗೃತಿ ಅಭಿಯಾನವನ್ನು ಹಳ್ಳಿಗಳ ಕೇರಿ ಕೇರಿಗಳಿಗೆ ಹೋಗಿ ಯಶಸ್ವಿಗೊಳಿಸಿದ್ದಾರೆ.

ಪೋತ್ನಾಳ ಸುತ್ತಲಿನ ಗ್ರಾಮಗಳನ್ನು ಹಸಿರು ಗ್ರಾಮಗಳನ್ನಾಗಿ ಮಾಡಲು ಗಿಡಗಳನ್ನು ನಡೆಸಿದ್ದಾರೆ. ಇದನ್ನೆಲ್ಲ ಮಾಡುತ್ತಿರುವ ಅವರು ಯಾವುದೋ ರಾಜಕೀಯ ಸಂಘಟನೆಯಲ್ಲಿ ಇದ್ದವರಲ್ಲ. ರಾಜಕೀಯ ಆಕಾಂಕ್ಷಿಯೂ ಅಲ್ಲ. ಸಮಾಜದ ಇತರರಂತೆ ತಾವು ಕೂಡ ಸುಮ್ಮನೆ ಕೂರಬಾರದು ಎಂದು ತಮ್ಮ ಕೈಲಾದ ಸೇವೆ ಮಾಡುತ್ತೇನೆ. ಸಮಾಜಸೇವೆಯನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುವುದು ನಿಜವಾದ ಸೇವೆ ಎಂದು ನಂಬಿದ್ದೇನೆ ಹಾಗಾಗಿ ಮಾಡುತ್ತೇನೆ ಎನ್ನುತ್ತಾರೆ .

ವಿಮುಕ್ತಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಅವರು ಮಾಡಿರುವ ಕಾರ್ಯಗಳಿಗೆ ಪಟ್ಟಿ ಮಾಡುತ್ತಾ ಹೋದರೆ ಈವರದಿ ಸಣ್ಣದು.

ಸರ್ಕಾರಿ ಶಾಲಾ ಸಬಲೀಕರಣಕ್ಕೆ ಆದ್ಯತೆ

ಪೋತ್ನಾಳ ಸುತ್ತಲಿನ ಹಲವು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅವರು ನೀಡಿರುವ ಕೊಡುಗೆ ಶ್ಲಾಘಿನೀಯ.ನಮ್ಮ ಶಾಲೆಗೆ ಕಂಪ್ಯೂಟರ್, ಪ್ರಾಜೆಕ್ಟರ್, ಶಾಲೆಗೆ ಅಗತ್ಯ ಪರಿಕರಗಳು, ಪೂರಕ ಬೋಧನೆಗಾಗಿ ತರಬೇತಿ ಶಿಕ್ಷಕರು, ಶಾಲೆಯ ಬಡಮಕ್ಕಳಿಗೆ ಹಲವು ಶೈಕ್ಷಣಿಕ ಸವಲತ್ತುಗಳನ್ನು ಅವರು ಹಲವು ವರ್ಷಗಳಿಂದ ಅವರು ನಮ್ಮ ಶಾಲೆಗೆ ಸಹ ಒದಗಿಸುತ್ತಿದ್ದಾರೆ .

ಶೋಷಿತರ ಸಮಸ್ಯೆಗಳ ಪರಿಹಾರಕ್ಕೆ ನಿರಂತರ ಶ್ರಮ

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ್ ಗ್ರಾಮದ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ (ರಿ) ಕಳೆದ ಹದಿನೈದು ವರ್ಷಗಳಿಂದ ರಾಯಚೂರು ಜಿಲ್ಲೆಯ 5 ತಾಲೂಕುಗಳಾದ ಮಾನವಿ, ಸಿಂಧನೂರು, ಮಸ್ಕಿ, ಸಿರಿವಾರ ಹಾಗೂ ರಾಯಚೂರು ತಾಲೂಕುಗಳಾದ್ಯಾಂತ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಯುವಕ ಯುವತಿಯರು, ವೃದ್ಧರು, ವಿಕಲಚೇತನರು, ವಿಧವೆಯರು, ಅನಾಥ ಮಕ್ಕಳು, ನಿರ್ಗತಿಕರು, ಕಡು ಬಡಕುಟುಂಬಗಳು, ಶಾಲೆಯಿಂದ ಹೊರಗುಳಿದ ಮಕ್ಕಳು, ಅನಾರೋಗ್ಯ ಪೀಡಿತರು ಹೀಗೆ ಎಲ್ಲ ರಂಗದವರ ಸೇವೆಗೆ ಬದ್ಧವಾಗಿರುವ ಸಂಸ್ಥೆಯಾಗಿದೆ.

ಈ ಸಂಸ್ಥೆಯು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣಕ್ಕೆ ಪ್ರೋತ್ಸಹ, ಗ್ರಾಮಗಳಲ್ಲಿ ಕಾರ್ಯಕರ್ತರನ್ನು ನೇಮಿಸಿ ಪರಿಹಾರಬೋದನೆ ತರಗತಿಗಳನ್ನು ಪ್ರಾರಂಭಿಸಿ 55,786 ಮಕ್ಕಳು ಕಲಿಕೆಯಲ್ಲಿ ಮುಂದುವರೆದಿದ್ದಾರೆ, ಮೆಟ್ರಿಕ್ ನಂತರದ ಹೆಚ್ಚಿನ ವ್ಯಾಸಂಗಕ್ಕಾಗಿ ಪ್ರತಿ ವರ್ಷ 150 ಮಕ್ಕಳಿಗೆ ಧನ ಸಹಾಯವನ್ನು ಮಾಡುತ್ತಿದೆ ಸುಮಾರು 2,580 ಮಕ್ಕಳು ಲಾಭವನ್ನು ಪಡೆದಿದ್ದಾರೆ, ಗ್ರಾಮಗಳಲ್ಲಿ ಉಚಿತ ಹೊಲಿಗೆ ತರಬೇತಿಗಳನ್ನು ಏರ್ಪಡಿಸಿ 1,876 ಕಿಶೋರಿಯರಿಗೆ, ಮಹಿಳೆಯರಿಗೆ ಸ್ವಾವಲಂಭನೆ ಬದುಕು ಸಾಗಿಸಲು ದಾರಿ ದೀಪವಾಗಿದೆ, ಹಳ್ಳಿಗಳಲ್ಲಿ ಕೌಶಲ್ಯಭಿವೃದ್ದಿ ತರಬೇತಿಗಳನ್ನು, ಹಾಗೂ ಉಚಿತ ಕಂಪ್ಯೂಟರ್ ತರಬೇತಿಗಳನ್ನು ನೀಡುವದರ ಜೊತೆಗೆ 1,230 ಯುವಕ ಯುವತಿಯರು ಸ್ವ ಉದ್ಯೋಗವನ್ನು ನಡೆಸಲು ವಿಮುಕ್ತಿ ಆಸರೆಯಾಗಿದೆ.

ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಆರೋಗ್ಯ ಸೇವೆಯನ್ನು ನೀಡುತ್ತಾ ಗರ್ಭಿಣಿಯರು, ವೃದ್ದರು, ವಯಸ್ಕರು, ಮತ್ತು ಮಕ್ಕಳು ಸೇರಿದಂತೆ ಸುಮಾರು 25,690 ಜನರು ಇದರ ಫಲವನ್ನು ಪಡೆಯುತ್ತಿದ್ದಾರೆ. ಸಂಸ್ಥೆಯು ಮಕ್ಕಳಿಗೆ ಮಾತ್ರವಲ್ಲದೆ ವಯಸ್ಕರು ಶಿಕ್ಷಣ ಪಡೆಯಲೆಂದು ವಯಸ್ಕರ ಶಿಕ್ಷಣವನ್ನು ಪ್ರಾರಂಭಿಸಿ 8,650 ಜನರಿಗೆ ಶಿಕ್ಷಣದ ಬೆಳಕನ್ನು ಬೆಳಗಿಸಿದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ 1,850 ಬಡಮಕ್ಕಳಿಗೆ ಶಿಕ್ಷಣಕ್ಕೆ ಉತ್ತೇಜನಕ್ಕಾಗಿ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ಹಾಗೂ ಬಟ್ಟೆಗಳನ್ನು ವಿತರಿಸುತ್ತಾ 45,860 ಮಕ್ಕಳನ್ನು ಪ್ರೊತ್ಸಾಹಿಸುತ್ತಿದೆ. ಹಳ್ಳಿಗಳ ಸರ್ಕಾರಿ ಶಾಲೆಗಳು ಮತ್ತು ಹಳ್ಳಿಯ ಪರಿಸರ ಹಚ್ಚ ಹಸಿರಿನಿಂದ ಕೂಡಿರಲೆಂದು 50,563 ಗಿಡಗಳನ್ನು ನೀಡಿದೆ.

ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯ ಮಕ್ಕಳ ಶಿಕ್ಷಣ, ನಾಯಕತ್ವ, ಹಕ್ಕುಗಳು, ಮೂಲಭೂತ ಸೌಕರ್ಯಗಳು ಹೀಗೆ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಟಾನ ಗೊಳಿಸುತ್ತಾ ಬಂದಿದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಬೇಕಾದ ಅನುಕೂಲತೆಯನ್ನು ಮಾಡುವ ಮೂಲಕ ಅಂದರೆ ಗ್ರಾಮಕ್ಕೆ ಒಬ್ಬರನ್ನು ಪರಿಹಾರ ಬೋಧಕರಾಗಿ ನೇಮಿಸುವುದು. ಕಲಿಕೆ ಸಾಮಾಗ್ರಿಗಳನ್ನು ನೀಡುವುದು. ಶಾಲೆಗಳಲ್ಲಿ ಮಕ್ಕಳು ಬಳಸಲಿಕ್ಕೆ ನೋಟಿಸ್ ಬೋರ್ಡಗಳನ್ನು, ಶಾಲೆಯಲ್ಲಿ ಕುಳಿತುಕೊಳ್ಳಲು ಚಾಪೆ, ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಆಟದ ಸಾಮಾಗ್ರಿಗಳು, ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವುದು. ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುವುದು. ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವುದು.

ಹಳ್ಳಿಗಳಲ್ಲಿ 350 ಮಕ್ಕಳ ಸಂಘಗಳನ್ನು ಪ್ರಾರಂಬಿಸಿ ಮಕ್ಕಳಿಗೆ ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಜೀತ ಪದ್ಧತಿ, ಮಕ್ಕಳ ಮಾರಾಟ ಮತ್ತು ಸಾಗಟ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಮಕ್ಕಳಲ್ಲಿ ನಾಯಕತ್ವ, ಪರಿಸರದ ಬಗ್ಗೆ ಕಾಳಜಿ, ಮಕ್ಕಳಿಗೆ ಬೇಕಾದಂತ ಹಕ್ಕುಗಳನ್ನು ಮತ್ತು ಸಮಸ್ಯೆಗಳನ್ನು ಗುರುತಿಸುವದು ಹಾಗೆ ಮಕ್ಕಳಿಗೆ ಆರೋಗ್ಯದ, ಹಾಗೂ ಸ್ವಚ್ಚತೆಯ ಬಗ್ಗೆ ಮನವಿರಿಕೆ ಮಾಡುವದು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಅವರನ್ನು ಅಕ್ಷರಸ್ಥರನ್ನಾಗಿಸಲು ತನ್ನನ್ನೇ ಮುಡುಪಾಗಿಟ್ಟಿದೆ.

ಸತೀಶ್ ಫರ್ನಾಂಡಿಸ್

ಸುಮಾರು 10 ವರ್ಷಗಳಲ್ಲಿ 15,000 ಮಕ್ಕಳು ಈ ಸೌಲಭ್ಯವನ್ನು ಪಡೆದಿದ್ದಾರೆ. ಕಳೆದ ಎರಡು ವರ್ಷದಿಂದ ಜಿಲಾದ್ಯಾಂತ ಮಕ್ಕಳ ಸಹಾಯವಾಣಿ (1098) ಕೆಲಸ ಮಾಡುತ್ತಾ 12,853 ಮಕ್ಳಳನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸ ಸಂಸ್ಥೆಯು ಮಾಡಿದೆ. ಪತ್ರಿಕೆ ಮಾಧ್ಯಮದ ಜೊತೆಗೆ ಉತ್ತಮ ಭಾಂಧವ್ಯವನ್ನು ಹೊಂದಿದ್ದು, ನಿರಂತರ ಕಾರ್ಯಕ್ರಮಗಳನ್ನು ಪ್ರಕಟಣೆಗೆ ನೀಡಿ, ಕಾರ್ಯಕ್ರಮದ ಉದ್ದೇಶವನ್ನು ಹೆಚ್ಚಿನ ಜನರಿಗೆ ಮುಟ್ಟಿಸಲು ಸದಾ ಪ್ರಯತ್ನಿಸುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಪ್ರಸಾರ ಮಾಧ್ಯಮದಲ್ಲಿ ಅಂದರೆ ಪಬ್ಲಿಕ್ ಟಿ.ವಿ.ಯಲ್ಲಿ ರಾಯಚೂರು ಜಿಲ್ಲೆಯ ಪಬ್ಲಿಕ್ ಹೀರೋ ಆಗಿ ಸಂಸ್ಥೆ ಕಾರ್ಯಕ್ರಮಗಳು ಪ್ರಸಾರಗೊಂಡಿವೆ.

ಸಂಘ-ಸಂಸ್ಥೆಗಳಿಂದ ಶ್ಲಾಘನೆ

ರಾಯಚೂರು ಜಿಲ್ಲೆ ಮತ್ತು ಮಾನ್ವಿ ತಾಲೂಕಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸನ್ಮಾನ ಪ್ರಶಸ್ತಿಗೆ ಪಾತ್ರವಾಗಿದೆ. ಮಕ್ಕಳ ಮಾಣಿಕ್ಯ ರಾಜ್ಯ ಪ್ರಶಸ್ತಿ 2020. ಜಿಲ್ಲಾ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಅಕಾಡೇಮಿ ಪ್ರಶಸ್ತಿ, ಉತ್ತಮ ಸಮಾಜ ಸೇವಕ ಪ್ರಶಸ್ತಿ-2017, ಉತ್ತಮ ಸಮಾಜ ಸೇವಕ ಪ್ರಶಸ್ತಿ- 2018 ಉತ್ತಮ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆ ಪ್ರಶಸ್ತಿ-2019, ಡಾಕ್ಟರೇಟ್ ಪ್ರಶಸ್ತಿ -2020, ಕಲ್ಯಾಣ ಕರ್ನಾಟಕ ಪ್ರಶಸ್ತಿಗಳು ದೊರೆತ್ತಿವೆ.

ನೊಂದು ಬೆಂದವರ ಜೊತೆಗೆ ಕೈಜೋಡಿಸಿ ಮುನ್ನಡೆಸುವದೇ ಇವರ ಮುಖ್ಯ ಉದೇಶವಾಗಿದೆ. ಅವರಿಂದ ಇನ್ನಷ್ಟು ಶೋಷಿತರ ಬಾಳಿಗೆ ಬೆಳಕಾಗಲಿ. ಅವರಿಗೂ ಸಹ ಬದುಕಿನಲ್ಲಿ ಶ್ರಮಕ್ಕೆ ತಕ್ಕ ಫಲ ಸಿಗಲಿ. ಅವರ ಸೇವೆ ಜೊತೆಗೆ ಇನ್ನಷ್ಟು ಸಂಘ-ಸಂಸ್ಥೆಗಳು ಕೈಜೋಡಿಸಲಿ ಎನ್ನುವುದೇ ನಮ್ಮ ಆಶಯ.

  • ರವಿರಾಜ್ ಸಾಗರ್, ಬರಹಗಾರರು